ಕೃಷ್ಣಮೂರ್ತಿ ಹುಣಸೂರು
(1914-1989). ಸಾಹಿತಿಯಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕನ್ನಡ ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನೊತ್ತಿದ ಹುಣಸೂರು ಕೃಷ್ಣಮೂರ್ತಿ ಅವರು ಗ್ರಾಂಥಿಕವಾಗಿದ್ದ ಕನ್ನಡ ಚಲನಚಿತ್ರ ಸಾಹಿತ್ಯವನ್ನು ಆಡುಮಾತಿಗೆ ತಂದು ಜನಮನಮುಟ್ಟಿದವರಲ್ಲಿ ಒಬ್ಬರು. 1914ರಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು, ನಾಟಕಗಳಲ್ಲಿನ ಆಸಕ್ತಿ ಕೃಷ್ಣಮೂರ್ತಿಗಳು ಮನೆಬಿಟ್ಟು ಓಡುವಂತಾಗಿಸಿತು. ಹೀಗೆ ಮುಂಬೈ ಸೇರಿ, ಅಲ್ಲಿ ಬಾಲಗಂಧರ್ವ ನಾಟಕ ಕಂಪೆನಿಯಲ್ಲಿ ಅವಕಾಶ ಪಡೆದರು. ಜೊತೆಗೆ ಮುಂಬೈನ ಬಾಂಬೆ ಟಾಕೀಸ್ ಸಂಸ್ಥೆಯ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ ಅಲ್ಲಿನ ವಾತಾವರಣ ಹಿಡಿಸದೆ ತವರಿಗೆ ಮರಳಿ, ಮಹಮ್ಮದ್ ಪೀರ್ ಸಾಹೇಬರ ಕಂಪೆನಿ, ವರದಾಚಾರ್ಯರ ಕಂಪೆನಿ ಹಾಗೂ ಗುಬ್ಬಿ ಕಂಪೆನಿಗಳಲ್ಲಿ ಬಗೆಬಗೆಯ ಪಾತ್ರಗಳಲ್ಲಿ ನಟಿಸತೊಡಗಿದರು. ಹಾಗೆ ರಂಗಭೂಮಿಯಲ್ಲಿ ಅಭಿನಯಿಸುತ್ತಿರುವಾಗಲೇ ಸಾಹಿತ್ಯದತ್ತ ಒಲವು ಬೆಳೆಯಿತು. ಬರವಣಿಗೆ ಇವರ ನಿತ್ಯಕಾಯಕವಾಯಿತು. ``ಗೌತಮ ಬುದ್ಧ ``ಧರ್ಮರತ್ನಾಕರ, ``ರಾಜಾಗೋಪಿಚಂದ್ ಮುಂತಾದ ನಾಟಕಗಳನ್ನು ಬರೆದರು. ಅವರ ಸಂಭಾಷಣೆ ಶೈಲಿ ಜನಮೆಚ್ಚುಗೆ ಪಡೆಯಿತು. ಪ್ರೇಕ್ಷಕರನ್ನು ನೇರವಾಗಿ ಮುಟ್ಟುವಂತಹ ಆಡು ಭಾಷೆಯ ಮಾತುಗಳು ಜನಪ್ರಿಯವಾಗುತ್ತಿದ್ದಂತೆಯೇ ಹುಣಸೂರು ಕೃಷ್ಣಮೂರ್ತಿಯವರು ಬರವಣಿಗೆಯತ್ತಲೇ ತಮ್ಮ ಗಮನ ಕೇಂದ್ರೀಕರಿಸಿದರು. ನಿರ್ಮಾಪಕ-ನಿರ್ದೇಶಕರುಗಳಾದ ಡಿ.ಶಂಕರ್‍ಸಿಂಗ್ ಮತ್ತು ಬಿ.ವಿಠಲಾಚಾರ್ಯ ಇವರ ಬರವಣಿಗೆಯಲ್ಲಿನ ಸತ್ವವನ್ನು ಅರಿತರು. ಹುಣಸೂರು ಕೃಷ್ಣಮೂರ್ತಿ ಅವರ ಎಲ್ಲ ಚಿತ್ರಗಳಿಗೂ ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯತೊಡಗಿದರು. ಸರಳ-ಸುಂದರ-ಆಡುಭಾಷೆಯ ಮಾತು-ಹಾಡುಗಳು ಪ್ರೇಕ್ಷಕರಿಗೆ ಮೋಡಿಮಾಡಿತು. ಭಕ್ತಿಪ್ರಧಾನ, ಜಾನಪದ, ಐತಿಹಾಸಿಕ, ಸಾಮಾಜಿಕ ಯಾವುದೇ ಆಗಿರಲಿ, ಆ ಪ್ರಕಾರಕ್ಕೆ ಒಪ್ಪುವಂಥ-ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂಥ ಸಾಹಿತ್ಯ ಇವರ ಲೇಖನಿಯಿಂದ ಮೂಡಿಬಂದಿತು. ಜಗನ್ಮೋಹಿನಿ, ರತ್ನಮಂಜರಿ, ಕನ್ಯಾದಾನ, ವೀರಸಂಕಲ್ಪ, ಬೂತಯ್ಯನ ಮಗ ಅಯ್ಯು, ಭಕ್ತಸಿರಿಯಾಳ, ಭಕ್ತಜ್ಞಾನದೇವ ಮತ್ತು ಭಕ್ತ ಕುಂಬಾರ, ಬಬ್ರುವಾಹನ, ಸತ್ಯಹರಿಶ್ಚಂದ್ರ ಎರಡು ವರ್ಷ ಸತತವಾಗಿ ಪ್ರದರ್ಶಿತವಾದ `ಬಂಗಾರದ ಮನುಷ್ಯ, ಹೀಗೆ ಅನೇಕ ಚಿತ್ರಗಳಿಗೆ ಹಾಡು-ಮಾತು ಬರೆದರು.

ಹುಣಸೂರು ಕೃಷ್ಣಮೂರ್ತಿಗಳು ``ರತ್ನಮಂಜರಿ'' ಚಿತ್ರದ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕರಾದರು. ವೀರಸಂಕಲ್ಪ ಚಿತ್ರ ಇವರದೇ ನಿರ್ಮಾಣ ನಿರ್ದೇಶನ. `ಸತ್ಯಹರಿಶ್ಚಂದ್ರ ಇವರ ನಿರ್ದೇಶನದ ಇನ್ನೊಂದು ಮುಖ್ಯ ಚಿತ್ರ. ಎಂ.ಪಿ.ಶಂಕರ್, ದ್ವಾರಕೀಶ್, ನಿರ್ದೇಶಕ ಭಾರ್ಗವ ಹೀಗೆ ಅನೇಕರನ್ನು ``ಬೆಳ್ಳಿತೆರೆಗೆ ಪರಿಚಯಿಸಿದರು.  
ಹುಣಸೂರು ಕೃಷ್ಣಮೂರ್ತಿಗಳು ತಮ್ಮನ್ನು ಒಬ್ಬ ಪತ್ರಕರ್ತನೆಂದೇ ಅನೇಕ ಸಲ ಕರೆದುಕೊಂಡುದೂ ಉಂಟು. ಮೈಸೂರಿನ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಶಾಲೆಯ ಮಾಸ್ತರರಾದ ಪಿ.ಆರ್.ರಾಮಯ್ಯನವರು ಸಂಪಾದಿಸಿ, ಪ್ರಕಟಿಸುತ್ತಿದ್ದ `ತಾಯಿನಾಡು ಪತ್ರಿಕೆಯನ್ನು ದಿನನಿತ್ಯ ಶಾಲೆ ಮುಗಿದ ನಂತರ ರಸ್ತೆಯ ಬದಿಯಲ್ಲಿಟ್ಟುಕೊಂಡು ಕೂಗಿ ಕೂಗಿ ಮಾರಾಟಮಾಡಿ ಬಂದ ಕಮಿಷನ್ ಹಣದಲ್ಲಿ ಹೊಟೇಲಿನಲ್ಲಿ ದೋಸೆ-ಕಾಫಿ ಕುಡಿಯುತ್ತಿದ್ದುದಾಗಿ ನೆನಪಿಸಿಕೊಳ್ಳುತ್ತಾ ತಾವೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಯೆಂದೇ ಹೇಳಿಕೊಳ್ಳುತ್ತಿದ್ದರು. ತಮ್ಮ ಸ್ವಂತ ನಿರ್ಮಾಣದ ಕೆಲವು ಚಿತ್ರಗಳಲ್ಲಿ ಆಭಿನಯಿಸಿಯೂ ಇದ್ದಾರೆ. ಬಿಳಿಕಚ್ಚೆಪಂಚೆ, ಬಿಳಿ ಜುಬ್ಬಾ, ಕೈಲೊಂದು ಸಿಗರೇಟು, ಇಷ್ಟೇ ಅವರ ಸರಳ ವೇಷಭೂಷಣ ಹಾಗೂ ಔದಾರ್ಯದ ನೇರ ನುಡಿಗಳು ಅವರನ್ನು ವಿಕಾಸದ ಹಾದಿಯಲ್ಲಿ ಕೊಂಡೊಯ್ದವು.

ರಾಜ್ಯಸರ್ಕಾರವು ಚಲನಚಿತ್ರ ನಿರ್ದೇಶಕರ ಸೇವೆಯನ್ನು ಗುರುತಿಸಿ, ಪುರಸ್ಕರಿಸಲು ``ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಯನ್ನು ಅಮಲುಗೊಳಿಸಿದಾಗ ಆ ಪ್ರಶಸ್ತಿಯನ್ನು ಮೊದಲು ಪಡೆದವರು ಹುಣಸೂರು ಕೃಷ್ಣಮೂರ್ತಿ. 1989ರ ಜನವರಿ 13ರಂದು ಹುಣಸೂರು ಕೃಷ್ಣಮೂರ್ತಿ ತಮ್ಮ 75ನೇ ವಯಸ್ಸಿನಲ್ಲಿ ವಿಧಿವಶರಾದರು. 
	(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ